ನಕಲಿ ಅಂಕಪಟ್ಟಿ ಮಾರಾಟದ ಕಿಂಗ್ ಪಿನ್ ಬಂಧನ: 28 ವಿಶ್ವವಿದ್ಯಾಲಯಗಳ ಹೆಸರಲ್ಲಿ ನಕಲಿ ದಾಖಲೆಗಳು ಮಾರಾಟ
ಕಲಬುರಗಿ: ದೇಶದ 28 ವಿಶ್ವವಿದ್ಯಾಲಯಗಳ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ರಾಜೀವ್ ಸಿಂಗ್ ಆರೋರಾವನ್ನು ಕಲಬುರಗಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಈ ಆರೋಪಿ ಕಳೆದ ಏಳೆಂಟು ವರ್ಷಗಳಿಂದ ಈ ಅಕ್ರಮ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾನೆ.
ನಕಲಿ ಅಂಕಪಟ್ಟಿಗಳ ಜೊತೆಗೆ, ಆರೋಪಿ ನಕಲಿ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಿ, ಅವುಗಳ ಹೆಸರಲ್ಲಿ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದ. ಕರ್ನಾಟಕದ ಬೆಂಗಳೂರು, ಮೈಸೂರು ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಹೆಸರಿನಲ್ಲೂ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಯಿಂದ 522 ನಕಲಿ ಅಂಕಪಟ್ಟಿಗಳು, 1,626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್ ಫೋನ್ಗಳು, 2 ಲ್ಯಾಪ್‌ಟಾಪ್‌ಗಳು, 1 ಪ್ರಿಂಟರ್, 122 ನಕಲಿ ವಿಶ್ವವಿದ್ಯಾಲಯ ಸೀಲ್‌ಗಳು, ಎಟಿಎಂ ಕಾರ್ಡ್, 123 ನಕಲಿ ಐಡಿ ಕಾರ್ಡ್‌ಗಳು ಮತ್ತು 85 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಪಿಯುಸಿ, ಡಿಪ್ಲೋಮಾ ಇನ್ ಎಜುಕೇಶನ್, ಡಿಪ್ಲೋಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ), ಬಿ.ಟೆಕ್ ಸೇರಿದಂತೆ ವಿವಿಧ ಕೋರ್ಸ್‌ಗಳ ನಕಲಿ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದ.
ಈ ಬಂಧನದ ಮೂಲಕ ಸೈಬರ್ ಕ್ರೈಂ ಪೊಲೀಸರು ದೊಡ್ಡ ಪ್ರಮಾಣದ ನಕಲಿ ದಾಖಲೆಗಳ ಜಾಲವನ್ನು ಅನಾವರಣಗೊಳಿಸಿದ್ದಾರೆ.
ವರದಿ: ಡಿ.ಪಿ. ಅರವಿಂದ್
