ರಾಜ್ಯದಲ್ಲಿ ಮಗು ಮಾರಾಟದ ದಂಧೆ ಜಾಲ ಪತ್ತೆ: ಮೂವರು ಬಂಧನ
ಹುಕ್ಕೇರಿ: ರಾಜ್ಯದಲ್ಲಿ ಮಗು ಮಾರಾಟದ ದಂಧೆಯ ಬೆಳಕಿಗೆ ಬಂದ ಘಟನೆಗೆ ಸಂಬಂಧಿಸಿ ಹುಕ್ಕೇರಿ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸುತ್ತಿದ್ದಾರೆ.
ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರದ ಅರ್ಚನಾ ಎಂಬುವವರ ಮಗುವನ್ನು ಖದೀಮರು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಕ್ಕೇರಿ ಪೊಲೀಸರು, ಸಂಗೀತ ತಾವಡೆ, ಮೋಹನ್ ತಾವಡೆ, ಮತ್ತು ಸಂಗೀತ ಗೌಳಿ ಎಂಬ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಕಾನೂನಿನ ಪ್ರಸ್ತಾವನೆ:
ಮಕ್ಕಳನ್ನು ಅನಧಿಕೃತವಾಗಿ ದತ್ತು ನೀಡುವ ಅಥವಾ ಪಡೆಯುವ ಕೃತ್ಯವು ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 80 ಮತ್ತು 81ನ್ವಯ ಕಠಿಣ ಅಪರಾಧವಾಗಿದ್ದು, ಇದಕ್ಕಾಗಿ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಇದೇ ರೀತಿ, ಆಸ್ಪತ್ರೆಯ ಸಿಬ್ಬಂದಿಗಳು ಈ ರೀತಿಯ ಅಪರಾಧದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಶಿಕ್ಷೆಯ ಅವಧಿ ಕನಿಷ್ಠ 3 ವರ್ಷದಿಂದ 7 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.
ಜನರಿಗೆ ಎಚ್ಚರಿಕೆ:
ಮಕ್ಕಳ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಸರ್ಕಾರವು ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಪೊಲೀಸರಿಗೆ ತಿಳಿಸಬೇಕೆಂದು ಮನವಿ ಮಾಡಿದೆ.
ಹುಕ್ಕೇರಿ ಪೊಲೀಸರು: ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ.
ವರದಿ: ಡಿ.ಪಿ ಅರವಿಂದ್
