ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ತುರ್ತು ಕ್ರಮ – ಗುರುದತ್ತ ಹೆಗಡೆ
ಶಿವಮೊಗ್ಗ, ಡಿಸೆಂಬರ್ 09 (ಎಫ್7 ನ್ಯೂಸ್)
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆಯನ್ನು ನಿಯಂತ್ರಿಸುವ ಭಾಗವಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದ್ದಾರೆ.
ತೀರ್ಥಹಳ್ಳಿ, ಹೊಸನಗರ, ಸಾಗರ ಸೇರಿದಂತೆ ಮಲೆನಾಡು ತಾಲೂಕುಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಉಣುಗುಗಳ ನಿಯಂತ್ರಣ, ಮಂಗಗಳ ಅಸಹಜ ಸಾವುಗಳ ಕುರಿತು ಸರ್ವೇಕ್ಷಣೆ ಮತ್ತು ಜ್ವರ ಸಮೀಕ್ಷೆಗಳನ್ನು ನಿರಂತರವಾಗಿ ನಡೆಸುವಂತೆ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಯಾವುದೇ ವ್ಯಕ್ತಿಗೆ ಜ್ವರ, ಶೀತ, ತಲೆನೋವು, ವಾಂತಿ, ಮೈಕೈ ನೋವು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು. ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವ ಜನರು ಮತ್ತು ರೈತರು ಆರೋಗ್ಯ ಇಲಾಖೆ ಉಚಿತವಾಗಿ ನೀಡುತ್ತಿರುವ ಡೀಪಾ ತೈಲವನ್ನು ಸುರಕ್ಷತಾ ಕ್ರಮವಾಗಿ ಬಳಸಬೇಕು ಎಂದರು.
ಸೋಂಕಿನ ಲಕ್ಷಣಗಳು ಕಂಡುಬಂದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ 24 ಗಂಟೆಗಳೊಳಗೆ ವರದಿ ಪಡೆದು ಚಿಕಿತ್ಸೆ ನೀಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಸೋಂಕಿನ ನಿಯಂತ್ರಣದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಅವರು ಗ್ರಾಮ ಪಂಚಾಯಿತಿ, ಆಶಾ ಮತ್ತು ಅಂಗನವಾಡಿ ಸಿಬ್ಬಂದಿ ಮೂಲಕ ಗ್ರಾಮೀಣ ಜನರಲ್ಲಿ ಮಂಗನ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಅಸಹಜವಾಗಿ ಮಂಗಗಳ ಸಾವುಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಾಣಂತಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ಡಿಸಿ ಗುರುದತ್ತ ಹೆಗಡೆ ಅಭಿಪ್ರಾಯಪಟ್ಟರು. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿನ ಗರ್ಭಿಣಿ ಮತ್ತು ಬಾಣಂತಿ ಸಾವಿನ ಪ್ರಕರಣಗಳನ್ನು ತಜ್ಞರ ತಂಡದ ಮೂಲಕ ಪರಿಶೀಲಿಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ ಜನವರಿಯಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಒಟ್ಟು 7,380 ರಕ್ತ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 76 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಎರಡು ಜೀವಹಾನಿ ಪ್ರಕರಣಗಳೂ ದಾಖಲಾಗಿವೆ. ಅಸಹಜವಾಗಿ 185 ಮಂಗಗಳ ಸಾವುಗಳು ದಾಖಲಾದ ಹಿನ್ನೆಲೆಯಲ್ಲಿ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಂಕಿತರಿಗೆ ಜಿಲ್ಲಾಮಟ್ಟದ ಮೆಗ್ಗಾನ್ ಬೋಧನಾ ಆಸ್ಪತ್ರೆ, ಸುಬ್ಬಯ್ಯ ಮೆಡಿಕಲ್ ಕಾಲೇಜು ಹಾಗೂ ಕೆಎಂಸಿ ಮಣಿಪಾಲ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಡಳಿತವು ಅರಣ್ಯ, ಆರೋಗ್ಯ, ಕಂದಾಯ, ಪಶುಸಂಗೋಪನೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಿಂದ ಮಕ್ಕಳ ಸಾವುನೋವುಗಳು ಸಂಭವಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಂಗನ ಕಾಯಿಲೆಯ ನಿಯಂತ್ರಣ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಲ್ಸ್ ಪೋಲಿಯೋ ಮೊದಲ ಹಂತದ ಲಸಿಕಾ ಆಂದೋಲನ ಡಿಸೆಂಬರ್ 21ರಂದು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಜಿಲ್ಲೆಯ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 1,23,338 ಮಕ್ಕಳಿಗೆ ಲಸಿಕೆ ಹಾಕುವ ಗುರಿ ನಿಗದಿಪಡಿಸಲಾಗಿದೆ. ಇದಕ್ಕಾಗಿ 1016 ಬೂತ್‌ಗಳು, 1905 ತಂಡಗಳು ಹಾಗೂ 193 ಉಸ್ತುವಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಾಲಾ ಮಕ್ಕಳಿಗೂ ಲಸಿಕೆ ಸಿಗುವಂತೆ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಹಾಗೂ ವಿವಿಧ ತಾಲೂಕುಗಳ ವೈದ್ಯಾಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.


