ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ 16,500 ಸರ್ಕಾರಿ ಶಾಲೆಗಳಿಗೆ ಹೊಸ ಅಡುಗೆ ಪಾತ್ರೆ: ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೀಳಾಗಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾನಾಡಿದ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು, ತಮ್ಮ ಸರ್ಕಾರದ ಶಿಕ್ಷಣ ಕ್ಷೇತ್ರದ ಬದ್ಧತೆಯನ್ನು ಪುನರುಚ್ಚರಿಸಿದರು.
ಆರೋಗ್ಯದ ದೃಷ್ಟಿಯಿಂದ ಹೊಸ ಅಡುಗೆ ಪಾತ್ರೆಗಳು:
ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಅಡುಗೆಯಲ್ಲಿ ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 16,500 ಶಾಲೆಗಳಿಗೆ ಹೊಸ ಅಡುಗೆ ಪಾತ್ರೆಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. "ಮೊಟ್ಟೆ ಮತ್ತು ಬಾಳೆಹಣ್ಣು ಸೇರಿದಂತೆ ಶಾಕಾಹಾರಿ-ಮಾಂಸಾಹಾರಿ ಆಹಾರಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ತಯಾರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ಹೊಸ ಪ್ರಯತ್ನ:
ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮೂಲಕ, ಮಕ್ಕಳನ್ನು ಖಾಸಗಿ ಶಾಲೆಗಳ ಬದಲು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ. "ನಮ್ಮ ನಾಯಕರಾದ ಶ್ರೀ ಬಂಗಾರಪ್ಪ ಮತ್ತು ಶ್ರೀ ಸಿದ್ದರಾಮಯ್ಯ ಇಬ್ಬರೂ ಕೂಡ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ" ಎಂದು ಅವರು ನೆನಪಿಸಿದರು.
ಎಲ್.ಕೆ.ಜಿ. ಶಾಲೆಗಳ ಪ್ರಾರಂಭ:
ಶೀಘ್ರದಲ್ಲೇ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಅಂಗನವಾಡಿಗಳ ಕಾರ್ಯದಲ್ಲಿ ಅಡ್ಡಿಪಡಿಸದೇ ಮಕ್ಕಳಿಗೆ ಪೂರ್ವಶಿಕ್ಷಣ ಕಲಿಸುವ ಅವಕಾಶ ದೊರೆಯಲಿದೆ ಎಂದು ಸಚಿವರು ಹೇಳಿದರು.
ಸ್ಮಾರ್ಟ್ ಕ್ಲಾಸ್ ಮತ್ತು ಉಚಿತ ವಿದ್ಯುತ್ ಸೌಲಭ್ಯ:
46,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದ್ದು, ಸ್ಮಾರ್ಟ್ ಕ್ಲಾಸ್ ಮತ್ತು ಟಿವಿಗಳ ಬಳಕೆ ಹೆಚ್ಚುತ್ತಿದೆ. "ಇದು ಮಕ್ಕಳ ಕಲಿಕೆಯನ್ನು ನವೀಕರಿಸಲು ಸಹಾಯವಾಗುತ್ತಿದೆ" ಎಂದು ಸಚಿವರು ಹೇಳಿದರು.
ತಂದೆಯವರ ಶಾಲೆಗೆ ಸಹಾಯಧನ:
ತಮ್ಮ ತಂದೆ ಬಂಗಾರಪ್ಪನವರು ಓದಿದ ಸರ್ಕಾರಿ ಶಾಲೆಗೆ ಸ್ವಂತ ಸಂಬಳದಿಂದ ₹10 ಲಕ್ಷ ರೂ. ನೀಡಿದ ವಿಚಾರವನ್ನು ಸಚಿವರು ಹಂಚಿಕೊಂಡರು. ಇದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ ಶಾಲೆಗಳಿಗೂ ತಲಾ ₹10 ಲಕ್ಷ ರೂಪಾಯಿಗಳನ್ನು ಸರ್ಕಾರದ ವತಿಯಿಂದ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ:
ರಾಜ್ಯಾದ್ಯಂತ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯಾಗಿದೆ. ಈಗಾಗಲೇ 300 ಶಾಲೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. "ಜನತೆಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ" ಎಂದು ಅವರು ತಿಳಿಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ:
ಈ ಬಾರಿ ಪರೀಕ್ಷೆಗಳಲ್ಲಿ ನಕಲು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ನಕಲು ನಿಗ್ರಹಿಸಿ, ಶುದ್ಧ ಪರಿಶೀಲನೆಗೆ ಅವಕಾಶ ನೀಡಲಾಗಿದೆ. "ಇದು ಗುಣಮಟ್ಟದ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಸಚಿವರು ಅಭಿಪ್ರಾಯಪಟ್ಟರು.
ಪೋಷಕರಿಗೆ ಕರೆ:
"ಪೋಷಕರು ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸಬೇಕು. ಶಾಲಾ ಹಾಜರಾತಿ ಪ್ರತಿ ದಿನವೂ ಅಗತ್ಯ" ಎಂದು ಅವರು ಪೋಷಕರಿಗೆ ಕರೆ ನೀಡಿದರು. ಜೊತೆಗೆ, ಶಿಕ್ಷಕರೂ ಕೂಡ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯುವಲ್ಲಿ ಮುಂದಾಗಬೇಕು ಎಂದು ಸಚಿವರು ಹೇಳಿದರು.
ವರದಿ: ಡಿ.ಪಿ. ಅರವಿಂದ್
ಸ್ಥಳ: ಬೀಳಾಗಿ, ಶಿವಮೊಗ್ಗ ಜಿಲ್ಲೆ


