ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ವಾತಿ ಮನೆಗೆ ಭೇಟಿ
ಹಾವೇರಿ: ಮಾಸೂರಿನಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸಂಬಂಧ ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾಸೂರಿನ ಕೊಪ್ಪಿಹೊಂಡ ಗ್ರಾಮದಲ್ಲಿರುವ ಮೃತೆ ಸ್ವಾತಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅವರು ಕುಟುಂಬದ ಸದಸ್ಯರ ದುಃಖಕ್ಕೆ ಭಾಗಿಯಾಗಿ, ವಿಶೇಷವಾಗಿ ಸ್ವಾತಿಯ ತಾಯಿ ಶಶಿರೇಖಾ ಅವರನ್ನು ಸಾಂತ್ವಾನಿಸಿದರು.
ಆರ್ಥಿಕ ಸಹಾಯ ಮತ್ತು ಭರವಸೆ
ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟದ ಅಡುಗೆ ಸಹಾಯಕೆಯಾಗಿ ಕೆಲಸ ಮಾಡಿಕೊಂಡಿರುವ ಶಶಿರೇಖಾರವರಿಗೆ ಆರ್ಥಿಕ ಸಹಾಯ ನೀಡಿ, ಸರ್ಕಾರದಿಂದಲೂ ಸಹಾಯ ದೊರಕಿಸಿಕೊಡುವ ಭರವಸೆ ನೀಡಿದರು. ಅವರ ಕುಟುಂಬವು ಈ ಆಘಾತಕರ ಘಟನೆಯಿಂದ ಹೊರಬರಲು ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪರಿಹಾರದ ಒತ್ತಾಯ
ಹಾವೇರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸಿದ ಈಶ್ವರಪ್ಪ, ಹಿಂದುಳಿದ ವರ್ಗದ ಸ್ವಾತಿಯ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ಸಂಬಂಧ ಪ್ರಸ್ತಾಪವನ್ನು ತಕ್ಷಣವೇ ಅಡಗಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ನ್ಯಾಯಕ್ಕಾಗಿ ತಾಯಿಯ ಮನವಿ
ಸ್ವಾತಿಯ ತಾಯಿ ಶಶಿರೇಖಾ, ತಮ್ಮ ಮಗಳ ದುರಂತ ಸಾವಿನಿಂದ ಕಂಗಾಲಾಗಿ, "ನನಗೆ ಯಾವುದೇ ರೀತಿಯ ಹಣದ ಸಹಾಯ ಬೇಕಾಗಿಲ್ಲ, ಬದಲಿಗೆ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ" ಎಂದು ಹೃತ್ಪೂರ್ವಕ ಮನವಿ ಮಾಡಿದರು. ಇಂತಹ ಘಟನೆಗಳು ಮತ್ತೊಮ್ಮೆ ನಡೆಯಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ವರದಿ: ಡಿ.ಪಿ. ಅರವಿಂದ್

