ಮೇಘಾಲಯ ರಾಜ್ಯಪಾಲ ಚಂದ್ರಶೇಖರ ಹೆಚ್. ವಿಜಯಶಂಕರರಿಂದ ಪದ್ಮಶ್ರೀ ಮಂಜಮ್ಮ ಜೋಗ್ತಿ ಅವರಿಗೆ ಗೌರವ
ಮರಿಯಮ್ಮನಹಳ್ಳಿ: 2021ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗ್ತಿ ಅವರ ಮನೆಗೆ ಭಾನುವಾರದಂದು ಮೇಘಾಲಯ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ ಭೇಟಿ ನೀಡಿ, ಅವರೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು.
ರಾಜ್ಯಪಾಲರು ಮಂಜಮ್ಮ ಜೋಗ್ತಿ ಅವರಿಗೆ ಮೇಘಾಲಯ ರಾಜ್ಯದ ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭ ಮಂಜಮ್ಮ ಜೋಗ್ತಿ ಅವರ ತಂಡದ ಸದಸ್ಯರು ಜೋಗ್ತಿ ಹಾಡು ಮತ್ತು ನೃತ್ಯ ನಡೆಸಿ ರಾಜ್ಯಪಾಲರನ್ನು ಸನ್ಮಾನಿಸಿದರು. ಜೋಗ್ತಿ ಸಮುದಾಯದ ಸಂಸ್ಕೃತಿಯ ಅನನ್ಯತೆಯನ್ನು ಅವಲೋಕಿಸಿದ ರಾಜ್ಯಪಾಲರು ಈ ನೃತ್ಯ, ಹಾಡುಗಳ ವೈಶಿಷ್ಟ್ಯಕ್ಕೆ ಮಾರುಹೋದರು.
ಭೂಮಿ ಮಂಜೂರಾತಿಗಾಗಿ ಮನವಿ
ಈ ಸಂದರ್ಭದಲ್ಲಿ ಮಂಜಮ್ಮ ಜೋಗ್ತಿ ಅವರು ತೃತೀಯಲಿಂಗಿ ಸಮುದಾಯದ ಕಲ್ಯಾಣಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅವರು ತಮ್ಮ ಸಮುದಾಯದ ಹಿರಿಯರು ಹಾಗೂ ತೃತೀಯಲಿಂಗಿ ಕಲಾವಿದರ ಪೋಷಣೆಯ ನಿಟ್ಟಿನಲ್ಲಿ 3 ಎಕರೆ ಭೂಮಿ ನೀಡುವಂತೆ ಸರ್ಕಾರವನ್ನು ವಿನಂತಿಸಿದರು. ಈ ಭೂಮಿಯಲ್ಲಿ ವೃದ್ಧಾಶ್ರಮ ಹಾಗೂ ಜೋಗ್ತಿ ಸಂಪ್ರದಾಯವನ್ನು ಮುಂದಿನ ಪೀಳಿಗೆಗಳಿಗೆ ಉಳಿಸುವ ಕಲಾ ಸಂಸ್ಥೆಯನ್ನು ಸ್ಥಾಪಿಸಲು ಬಯಸಿದ್ದಾರೆ.
"ವಯಸ್ಸಾದ ತೃತೀಯಲಿಂಗಿಗಳು ಸಮಾಜದಿಂದ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದಾರೆ. ಅವರ ಅಂತಿಮ ದಿನಗಳು ಮಾನವೀಯ ಸ್ಪರ್ಶವಿಲ್ಲದೇ ಸಾಗುತ್ತಿವೆ. ಈ ಕಾರಣಕ್ಕಾಗಿ ವೃದ್ಧಾಶ್ರಮವೊಂದನ್ನು ನಿರ್ಮಿಸಲು ಸರ್ಕಾರವು ಬೆಂಬಲ ನೀಡಬೇಕು," ಎಂದು ಮಂಜಮ್ಮ ಜೋಗ್ತಿ ಮನವಿ ಮಾಡಿದರು.
ಕಲಾ ಸಂಸ್ಥೆಯು ತೃತೀಯಲಿಂಗಿ ಸಮುದಾಯದ ಜನರಿಗೆ ಕಲೆಯನ್ನು ಅಭ್ಯಾಸ ಮಾಡಲು, ಶಿಕ್ಷಣ ನೀಡಲು, ಹಾಗೂ ಸ್ವಾವಲಂಬನೆಯ ದಾರಿಗೆ ಯನ್ನು ಕರೆದೊಯ್ಯಲು ಪೂರಕವಾಗಲಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ಕೂಡಲೇ ಸಹಾಯ ಮಾಡಬೇಕು ಎಂಬುದು ಅವರ ಮನವಿ.
ಸಭೆಯಲ್ಲಿ ಭಾಗವಹಿಸಿದ ಗಣ್ಯರು
ಈ ಸಂಧರ್ಭದಲ್ಲಿ ತಹಶೀಲ್ದಾರ್ ಶೃತಿ ಎಂ. ಮಳ್ಳಪ್ಪಗೌಡ, ಪ.ಪಂ. ಮುಖ್ಯಾಧಿಕಾರಿ ಎಂ. ಖಾಜ, ಉಪ ತಹಶೀಲ್ದಾರ್ ಶ್ರೀಧರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವರೆಡ್ಡಿ, ಹ. ಬೊ. ಹಳ್ಳಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ, ಎಸ್. ಕೃಷ್ಣನಾಯ್ಕ್, ಬಲಹುಣುಸಿರಾಮಣ್ಣ, ಗುಂಡಾ ಕೃಷ್ಣ, ವೀರೇಶ್ವರಸ್ವಾಮಿ, ಗಂಡಿ ಬಸವರಾಜ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವರದಿ: ಡಿ.ಪಿ ಅರವಿಂದ್
