ಸಮಾಜದ ಬದುಕಿಗೆ ಸ್ಪಂದಿಸುವ ಪತ್ರಕರ್ತ - ಗಾರಾ. ಶ್ರೀನಿವಾಸ್

 ಮಲೆನಾಡಿನ ಸಹಕಾರಿ ದನಿ ಮಂಜುನಾಥ್: ಸಮಾಜದ ಬದುಕಿಗೆ ಸ್ಪಂದಿಸುವ ಪತ್ರಕರ್ತ  

- ಗಾರಾ. ಶ್ರೀನಿವಾಸ್ 



ಬದುಕೆಂಬ ಭವಸಾಗರದಲ್ಲಿ ಪ್ರತಿಯೊಬ್ಬರದೂ ಒಂದು ವಿಶಿಷ್ಟ ಪಥವಿದೆ. ಅದನ್ನು ಅನುಕರಿಸುವುದು ಅಸಾಧ್ಯ. ಪ್ರತಿಯೊಬ್ಬರ ಬದುಕುಗಳ ಕಥೆಗಳು, ಅನುಭವಗಳು ಮತ್ತು ಸಾಧನೆಗಳು ಕೃತಿಗಳ ಪುಟಗಳಿಗಿಂತಲೂ ಮಿಗಿಲಾದವು. ಇಂತಹದೇ ಒಂದು ಜೀವನಯಾತ್ರೆಯನ್ನು ಮಲೆನಾಡಿನ ತವರು ನೆಲೆಯಲ್ಲಿ ತನ್ನದೇ ಆದ ಗುರುತಿಸುವಿಕೆಯೊಂದಿಗೆ ಸಾಗಿಸುತ್ತಿರುವವರು ಪತ್ರಕರ್ತ ಮತ್ತು ಸಹಕಾರಿ ದನಿ ಹೆಚ್.ಎನ್. ಮಂಜುನಾಥ್. ಕ್ಲಿಷ್ಟಕರ ನೋವು, ನಲಿವುಗಳ ನಡುವೆ ಸಾಧಿಸಿದ ಹೆಜ್ಜೆಗಳು, ವ್ಯಥೆಗಳ ಸುಳಿಯಲ್ಲಿ ಸಿಲುಕಿ ನಲುಗಿದ ಪ್ರತಿ ಸಂದರ್ಭಗಳಲ್ಲೂ ಅವರು ತಮ್ಮ ರುಧಿರದ ನೆನಪುಗಳನ್ನು ಬಿತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರ ಸ್ವಾದವನ್ನು ಸ್ವಾದಿಸಿಕೊಂಡು, ಎಲ್ಲರೊಳಗೆ ಒಂದಾಗುವ ಮಾತೃ ಮನಸ್ಸಿನ ಅಂತರ್ಮುಖಿಯಲ್ಲಿ ದೊಡ್ಡ ಕನಸುಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವವರು ಮಂಜುನಾಥ್.  


ಸುಧೀರ್ಘ ಕಾಲದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್, ಸಹಕಾರಿ ಕ್ಷೇತ್ರದಲ್ಲಿ ಅಮೂಲ್ಯ ಮಾರ್ಗದರ್ಶನ ನೀಡಿದ್ದಾರೆ. ಸಮಾಜಪರ ವೇದಿಕೆಗಳ ಮೂಲಕ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಧ್ವನಿ ನೀಡಿದ್ದಾರೆ. ಸಾಂವಿಧಾನಿಕ ನ್ಯಾಯಕ್ಕಾಗಿ ಹೋರಾಟಗಳನ್ನು ರೂಪಿಸಿದ್ದಾರೆ. 'ನುಡಿಗಿಡ' ಪತ್ರಿಕೆಯ ಸಂಪಾದಕರಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದಾರೆ. ದಣಿವರಿಯದೆ ತಮ್ಮ ವ್ಯಕ್ತಿತ್ವ ವಿಕಸನದಲ್ಲಿ ಬಹುತ್ವ ಭಾವನೆ ಬಿತ್ತಿ, ಅಸಹಾಯಕರಿಗೆ ಮತ್ತು ಶೋಷಿತರಿಗೆ ಮಾನವೀಯ ಸ್ಪಂದನೆಯಲ್ಲಿ ಸ್ಪಂದಿಸುತ್ತಿದ್ದಾರೆ. ಮಂಜುನಾಥ್ ಓರ್ವ ಜೀವಪರ ನಿಲುವಿನ ವ್ಯಕ್ತಿತ್ವವನ್ನು ಹೊಂದಿದ್ದು, ಸಮಾಜದಲ್ಲಿ ಪಕ್ವತೆಯನ್ನು ಸಾಧಿಸಿದ್ದಾರೆ.  


ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ್ 24 ವರ್ಷಗಳಿಗೂ ಮೀರಿ ಶ್ರಮಿಸಿದ್ದಾರೆ. ಅವರು ಅನೇಕ ಸಹಕಾರಿ ಸಂಘಗಳಿಗೆ ಕಾನೂನು ರೀತ್ಯಾ ಮಾರ್ಗದರ್ಶನ ನೀಡಿದ್ದಾರೆ. ಇದು ಸಹಕಾರಿ ಕ್ಷೇತ್ರದ ಗೌರವಕ್ಕೆ ಅರ್ಹವಾದ ಸೇವೆಯಾಗಿದೆ. ಆದರೆ, ಇಲಾಖೆಗಳು ಮತ್ತು ವ್ಯವಸ್ಥೆಗಳು ಇದನ್ನು ನಿರ್ಲಕ್ಷಿಸಿವೆ. ಮಂಜುನಾಥ್‌ರವರಿಗೆ ಸಹಕಾರಿ ಕ್ಷೇತ್ರದ ಅಮಲು ಮುಗಿದಿಲ್ಲ; ಇದು ಅವರ ಹವ್ಯಾಸವಾಗಿದೆ. ಸಹಕಾರಿ ಸಂಘಗಳ ಸ್ಥಾಪನೆ, ನಿಯಮಾವಳಿಗಳ ಸ್ಪಷ್ಟೀಕರಣ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಇಂದಿಗೂ ಅವರನ್ನು ಹುಡುಕಿಕೊಂಡು ಬರುತ್ತಾರೆ. ಇದರ ಫಲವಾಗಿ, ಅವರು ಸುಮಾರು 38 ಸ್ವ-ಸಹಾಯ ಸಂಘಗಳ ರಚನೆಗೆ ಮೂಲ ಕಾರಣಕರ್ತರಾಗಿದ್ದಾರೆ.  


ನಿರುದ್ಯೋಗಿ ಮಹಿಳೆಯರು ಮತ್ತು ಯುವತಿಯರಿಗೆ ಸ್ವಾವಲಂಬಿ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಮಂಜುನಾಥ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ತೆಂಗಿನನಾರು, ನೇಯ್ಗೆ, ಸ್ಕ್ರೀನ್ ಪ್ರಿಂಟಿಂಗ್, ಹಪ್ಪಳ-ಸೆಂಡಿಗೆ, ರೆಡಿಮೇಡ್ ಗಾರ್ಮೆಂಟ್ಸ್ ಮುಂತಾದ ವಿವಿಧ ಉದ್ಯೋಗಗಳಿಗೆ ತರಬೇತಿ ನೀಡಿ, ಸಾಲ ಸೌಲಭ್ಯಗಳನ್ನು ಒದಗಿಸಿದ್ದಾರೆ. ಇದರ ಮೂಲಕ ನೂರಾರು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದಾರೆ. ಅವರ ಈ ಸಾಧನೆಗಳು ಸಹಕಾರಿ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿವೆ.  


ಮಂಜುನಾಥ್‌ರವರು ಶಿವಮೊಗ್ಗದಲ್ಲಿ ಜನಿಸಿದ್ದು, ಸಿವಿಲ್ ಡಿಪ್ಲೊಮಾ ಮತ್ತು ಸಹಕಾರಿ ಡಿಪ್ಲೊಮಾ ಪದವಿಗಳನ್ನು ಹೊಂದಿದ್ದಾರೆ. 2002ರಲ್ಲಿ ಪತ್ರಿಕೋದ್ಯಮದಲ್ಲಿ ಪ್ರವೇಶಿಸಿದ ಅವರು, ಇಂದು 20 ವರ್ಷಗಳ ಪತ್ರಿಕಾ ಅನುಭವವನ್ನು ಹೊಂದಿದ್ದಾರೆ. ಪತ್ರಿಕಾ ಹಾದಿಯಲ್ಲಿ ಅನೇಕ ಬಾರಿ ಅಸೂಯೆ, ಪೈಪೋಟಿ ಮತ್ತು ವೃತ್ತಿ ವೈಷಮ್ಯಗಳ ನಡುವೆ ಸಿಲುಕಿ ನೋವನ್ನು ಅನುಭವಿಸಿದ್ದಾರೆ. ಆದರೂ, ಅವರು ತಮ್ಮ ಗುರಿಯತ್ತ ನಿರಂತರವಾಗಿ ಸಾಗಿದ್ದಾರೆ.  


ಪತ್ರಿಕಾ ಸೇವೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅವರು ನೀಡಿರುವ ಸೇವೆಗಳು ಅಮೂಲ್ಯವಾಗಿವೆ. ಅವರ ಕೈಬರಹ ಕನ್ನಡದ ಕಂಪನ್ನು ಸೂಚಿಸುತ್ತದೆ. ಅವರ ಬರಹಗಳು ಕನ್ನಡ ಸಾಹಿತ್ಯಕ್ಕೆ ಹಿರಿಮೆ ತಂದಿವೆ. ಅವರ ಸರಳ ಮತ್ತು ಚಾಕಚಕ್ಯತೆಯ ಬರಹ ಶೈಲಿ ಕನ್ನಡ ಕೈಬರಹಗಾರರ ಪಟ್ಟಿಯಲ್ಲಿ ಅವರನ್ನು ಪ್ರಮುಖ ಸ್ಥಾನದಲ್ಲಿ ನಿಲ್ಲಿಸಿದೆ.  


ದಿವಂಗತ ಎಸ್. ಬಂಗಾರಪ್ಪನವರ ಕಾಲದಲ್ಲಿ ರಾಜಕೀಯ ಪ್ರವೇಶಿಸಿದ ಮಂಜುನಾಥ್, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ಅವರು ಬಿಜೆಪಿಯ ಸ್ಥಳೀಯ ಪ್ರಮುಖರಾಗಿ ಮತ್ತು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಸಾಮರ್ಥ್ಯಗಳು ಅವರನ್ನು ಅಸಾಧಾರಣ ಶಕ್ತಿಯಾಗಿ ಮಾಡಿವೆ.  


ಮಂಜುನಾಥ್‌ರವರ ಜೀವನ ಮತ್ತು ಸಾಧನೆಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವಂಥವು. ಅವರ ಸೇವೆ ಮತ್ತು ಸಾಧನೆಗಳು ಮಲೆನಾಡಿನ ಸಹಕಾರಿ ಕ್ಷೇತ್ರದಲ್ಲಿ ಶಾಶ್ವತ ಮುದ್ರೆಯನ್ನು ಒತ್ತಿವೆ. ಅವರ ಬದುಕು ಮತ್ತು ಸಾಧನೆಗಳು ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ.  


ವರದಿ: ಗಾರಾ. ಶ್ರೀನಿವಾಸ್

Post a Comment

Previous Post Next Post